ನನ್ನಂತೆ ಬಹಳಷ್ಟು ಮಂದಿ ಈ ರೀತಿಯ ಜೀವನವನ್ನು ಅನುಭವಿಸಿರಬಹುದು ! ಇಲ್ಲಿ ನಾನು ಬರಿಯ ಉದಾಹರಣೆಯಷ್ಟೇ.
ಒಮ್ಮೊಮ್ಮೆ ಅನಿಸುತ್ತದೆ ನಾನು ‘ಸರಿ ತಪ್ಪು’ ಹೇಳಲು ಶುರುಮಾಡಿದರೆ ಅವರು ತಮ್ಮ ಹುಡುಕಾಟವನ್ನೇ ನಿಲ್ಲಿಸಿಬಿಡುವರು ಎಂದು. ಎಲ್ಲರಿಗೂ ತಮ್ಮ ತಮ್ಮ ಜೀವನವನ್ನು ಅನುಭವಿಸುವ ಅಧಿಕಾರ ಇದೆ, ನಾನು ನನ್ನ ವಿಚಾರವೇ ಸರಿ-ತಪ್ಪು ಎಂದು ಹೇಳಬಾರದು ಅಲ್ಲವೇ ?
ಯಾವುದೋ ಒಂದು ಸಣ್ಣ ಪಬ್’ನಲ್ಲಿ ಕುಳಿತು ನನಗೆ ಈ ಕ್ಷಣ ಅನಿಸುತ್ತಿರುವುದನ್ನು ಬರೆಯುತ್ತಿದ್ದೇನೆ. ಸಾವಿರಾರು ಮೈಲಿ ದೂರ ಬಂದು ಒಬ್ಬನೇ ಇದ್ದು ಕೆಲಸ ಮಾಡುತ್ತಾ, ಅದು ಹೀಗೆ, ಇದು ಹೀಗೆ, ಅವರು ಹೀಗೆ, ಇವರು ಹೀಗೆ, ಆದ ಚೆನ್ನಾಗಿಲ್ಲ, ಇದು ತುಂಬಾ ಚೆನ್ನಾಗಿದೆ ಎಂದು ಎಲ್ಲದರ ಮೇಲೆ ಅಭಿಪ್ರಾಯ ಹೇಳುತ್ತಾ ಮನಸಿನ ಎಲ್ಲ ರೀತಿಯ ಯೋಚನೆಗಳನ್ನು ತಿರುವುತ್ತಾ ಕೈಯಲ್ಲಿ ಸುರೆ ಮತ್ತು ಪೆನ್ನು ಹಿಡಿದು ಕುಳಿತಿದ್ದೇನೆ.
ತಕ್ಷಣಕ್ಕೆ ನನ್ನ ತಲೆಯಲ್ಲಿ ಹೊಳೆಯುತ್ತಿರುವುದು ೨(2) ವಿಚಾರಗಳು.
ಮೊದಲನೆಯದಾಗಿ ನನ್ನ ಚಿಕ್ಕಪ್ಪನ ಮಗಳ (ತಂಗಿಯ) ಮದುವೆ ಹಾಸನದಲ್ಲಿ ನಡಿಯುತ್ತಿದೆ. ನಾನು ಅಲ್ಲಿಗೆ ಹೋಗಲಾರದೆ ಕೆಲಸದ ವಿಷಯದಲ್ಲಿ ಸಿಲುಕಿ ಕೆಲಸದ ಸುಳಿಯಿಂದ ತಪ್ಪಿಸಿಕೊಳ್ಳಲಾರದೆ ನನ್ನ ತಂಗಿಯ ಮದುವೆಗೆ ಹೋಗಲಿಲ್ಲವಲ್ಲಾ ಎಂದು ಚುಚ್ಚುತ್ತಿರುವ ಮನಸ್ಸಿನಿಂದ ಬರೆಯುತ್ತಿದ್ದೇನೆ. ನನ್ನ ಚಿಕ್ಕಪ್ಪ-ಚಿಕ್ಕಮ್ಮ ನಿಸ್ವಾರ್ಥವಾಗಿ ನನ್ನ ಎಲ್ಲ ಕಾರ್ಯಕ್ರಮಗಳಿಗೆ ಬಂದು ಭಾಗಿಗಳಾಗಿ ತಮ್ಮ ಕೈಲಾದಷ್ಟು ಸಹಾಯಮಾಡಿದ ನೆನಪು ಮರೆಯಲಾಗುವುದಿಲ್ಲ ಹಾಗು ಮರೆಯುವಂಥಹದಲ್ಲ. ಮಧುವೆ ಒಂದು ಅತ್ಯಂತ ಮುಖ್ಯವಾದ ಕಾರ್ಯ ಅದು ಎರಡು ತನು-ಮನಗಳನಷ್ಟೆ ಅಲ್ಲದೇ, ಎರಡು ಸಂಸಾರವನ್ನಷ್ಟೇ ಅಲ್ಲದೇ ಹಲವಾರು ಸಂಬಂಧಗಳನ್ನು ಬೆಸೆಯುತ್ತದೆ. ಆದು ಒಂದು ಮಹಾ ಸಮಯ. ನನ್ನ ತಂಗಿ, ಚಿಕಮ್ಮ, ಚಿಕ್ಕಪ್ಪ ಎಲ್ಲರೂ ನಮ್ಮನ್ನು ಗೌರವದಿಂದ ನೋಡಿದ ವ್ಯಕ್ತಿಗಳು ಈ ಸಮಯದಲ್ಲಿ ನಾನು ಭಾಗಿಯಾಗಲಿಲ್ಲವಲ್ಲ ಎಂದು ಬೇಜಾರು ಬರುತ್ತಿದೆ.
ಎರಡನೆಯ ವಿಚಾರ ಮನಸ್ಸಿನಲ್ಲಿ ಕೊರೆಯುತ್ತಿರುವುದು, ಈಗ ಕಟ್ಟುತ್ತಿರುವ ಮನೆ ಒಂದು ಹಂತಕ್ಕೆ ಬಂದು ನಿಂತಿದೆ, ಈ ಮನೆಯ ಪಾಯ ಹಾಕಿದಾಗ ಎಷ್ಟು ಸಣ್ಣದಾಗಿ ಕಾಣುತ್ತಿತ್ತು. ಈಗ ‘ಕಾರ್ತೀಕ್’ ಕಳಿಸಿದ ಚಿತ್ರ ನೋಡಿದಮೇಲೆ ಎಷ್ಟು ದೊಡ್ಡದಾಗಿ ಕಾಣುತ್ತಿದೆ. ಒಮ್ಮೂಮೆ ಭಯವಾಗುತ್ತದೆ ಈ ರೀತಿಯಾದ ಮನೆ ಕಟ್ಟಿ ಎಷ್ಟು ಸಾಲ ಮಾಡಬೇಕಾಯಿತಲ್ಲ ಎಂದು. ಅದಿರಲಿ ಸಾಲ ಹೇಗೊ ತೀರುತ್ತದೆ ಆದರೇ ಮಕ್ಕಳು, ಹೆಂಡತಿ, ಅಪ್ಪ, ಅಮ್ಮ, ಅಕ್ಕ, ಭಾವ, ಅತ್ತೆ-ಮಾವ, ಹಿತೈಷಿಗಳು, ಮಿತ್ರರು ಎಲ್ಲರನ್ನೂ ದೂರಬಿಟ್ಟು ಯಾವುದೋ ಕೆಲಸಕ್ಕೆ ಅಂಟಿಕೊಂಡು ದುಡಿಯುತ್ತಿದ್ದೆನಲ್ಲಾ ಎಂದೆನಿಸುತ್ತಿದೆ. ಮನೆ ಕಟ್ಟುವುದೇ ಒಂದು ಪರಮ ಗುರಿಯೋ? ಎಂದು ನನ್ನ ಪ್ರಜ್ಞೆ ನನ್ನನ್ನು ವ್ಯಂಗ್ಯ ಮಾಡುತ್ತಿದೆ. ಜೀವನ – ಜೀವ ಏನೆಂದು ಗೊತ್ತಿದ್ದರೂ ಹೀಗೆ ಮಾಡುತ್ತಿದ್ದೀಯಲ್ಲೋ ಎಂದು ಅಣಕಿಸುತ್ತಿದೆ.
೪೦(40) ದಾಟಿದೆ, ದಾಟಿ ನಿಂತಿದೆ. ನಾನು ಕೂಡ ಎಲ್ಲರಂತೆಯೇ ಬದುಕಬೇಕಾದ ಪ್ರಸಂಗ ತಂದುಕೊಂಡಿದ್ದೆನಲ್ಲಾ ಎಂದು ಅನಿಸುತ್ತೆದೆ. ಹಾಗೊಂದು ವೇಳೆ ಮನೆ ಕಟ್ಟಿದರೂ, ಮನೆ ಕಟ್ಟುವಾಗ ಅದರ ಹತ್ತಿರ ಹೋಗಿ ನಿಂತು, ಅಲ್ಲಿಯ ಆಗು-ಹೋಗುಗಳನ್ನು ನೋಡಲಾಗುತ್ತಿಲ್ಲವಲ್ಲಾ ಏನು ಮಾಡುವುದು? ಎಂದು ಪರಿತಪಿಸುತ್ತಿದ್ದೇನೆ.
ನನಗೆ ಚೆನ್ನಾಗಿ ನೆನಪಿದೆ, ನಾನು ಯಾವಾಗಲೂ ಅಂದುಕೊಳ್ಳುತ್ತಿದೆ, ಕೆಲ ಆಪ್ತರೊಡನೆ ಹೇಳಿಕೊಂಡಿದ್ದು ಕೂಡ ಇದೆ ‘ ನಾನು ಈರೀತಿಯಾಗಿ ದುಡ್ಡಿಗಾಗಿ ಬದುಕುವ ಕೆಲಸವನ್ನು ಎಂದೂ ಮಾಡುವುದಿಲ್ಲ‘ ಎಂದು. ಇಂದಿಗೂ ನನಗೆ ಹಣ ಮುಖ್ಯವಲ್ಲ ಆದರೇ ಎಲ್ಲರಂತೆ ಮನೆ ಮಾಡುವ, ಎಲ್ಲರಂತೆ ಮಕ್ಕಳ ಉನ್ನತ ಭವಿಷ್ಯ ನೋಡುವ , ಎಲ್ಲರಂತೆ ಉತ್ತಮ ಬದುಕನ್ನು ನಿರೀಕ್ಷಿಸುವ ದಾರಿಯನ್ನು ಹಿಡಿದಮೇಲೆ ಲೌಕಿಕವಾಗಿರದೇ, ಬೇರೆಡೆಗೆ ಓಡಲು ಸಾಧ್ಯವೇ? ಹಣ ಒಂದು ಮೂಗುದಾರ ನನಗೆ. ಒಮೊಮ್ಮೆ ನನಗೆ ಅನಿಸುತ್ತೆ ‘ನನ್ನದೇ ಆದ ಮನೆ ಏಕೆಬೇಕು ?‘.
ಒಳ್ಳೆಯ ಕಾರು ಬೇಕು, ಒಳ್ಳೆಯ ಪುಸ್ತಕ ಬೇಕು, ಒಳ್ಳೆಯ ಬಟ್ಟೆ ಬೇಕು, ಒಳ್ಳೆಯ ಸಿನೆಮಾ ನೋಡಬೇಕು, ಒಳ್ಳೆಯ ಅಂಗಡಿಗೆ ಹೋಗಬೇಕು, ಒಳ್ಳೆಯ ‘ಹೋಟೆಲ್’ಗೆ ಹೋಗಬೇಕು, ಓಡಾಡಲು ಒಳ್ಳೆಯ ಸ್ಕೂಟರು ಬೇಕು ಎಲ್ಲವೂ ಒಳ್ಳೆಯದೇ ಆಗಬೇಕು. ಆದರೇ ಈ ಎಲ್ಲ ‘ಒಳ್ಳೆಯದೂ’ ದುಬಾರಿಯಲ್ಲವೇ ? ಸರಳವಾಗಿದ್ದಿದ್ದರೆ ಇವಲ್ಲದರ ಅವಶ್ಯಕತೆ ಇರುತ್ತಿರಲ್ಲಿಲ್ಲ ಮತ್ತು ಯಾವುದೂ ಸಮಸ್ಯೆಯಾಗುತ್ತಿರಲಿಲ್ಲ. ದುಡಿಮೆಗೆ ಒಂದು ಬೆಲೆಯೇ ಇಲ್ಲವಲ್ಲಾ !
ನಾನು ಕೆಲಸ ಮಾಡುತ್ತಿರುವ (ಇರೋಪ್ಯ-ಪಾಶ್ಚಾತ್ಯ) ದೇಶಗಳನ್ನು ನೋಡಿದರೆ ಭಯವಾಗುತ್ತದೆ ಬಹಳಷ್ಟು ಜನ ಒಂಟಿಯಾಗಿ ಕೆಲಸ ಮಾಡುವವರೇ… ಯಾರ ಜತೆ ಒಡನಾಟವಿಲ್ಲ, ಮಾತು-ಕತೆ ಇಲ್ಲ, ಸಂಬಂಧ ಬರಿಯ ದೇಹಕ್ಕೆ ಸೀಮಿತ. ಒಬ್ಬರೇ ಮನೆಯಲ್ಲಿ, ಒಬ್ಬರೇ ಪಾರ್ಕ್ ನಲ್ಲಿ, ಒಬ್ಬರೇ ಪಬ್ ನಲ್ಲಿ, ಒಬ್ಬರೇ ಚಿತ್ರ ಮಂದಿರದಲ್ಲಿ, ಒಬ್ಬರೇ ಫೋನ್ ನಲ್ಲಿ, ಒಬ್ಬರೇ ವೀಡಿಯೊ ಗೇಮ್ ನಲ್ಲಿ, ಒಬ್ಬರೇ ಆಸ್ಪತ್ರೆಯಲ್ಲಿ, ಒಬ್ಬರೇ ಆಫೀಸ್ ನಲ್ಲಿ ಅಬ್ಬಾಬಾ !!. ಒಂಟಿತನದ ಶಿಕ್ಷೆ ಯಾವ ನರಕಕ್ಕೂ ಕಡಿಮೆ ಇಲ್ಲ.
ನನ್ನ ಮುಂದಿನ ಪೀಳಿಗೆಗೆ ನಾನು ಸಧ್ಯವಾದಷ್ಟೂ ನನ್ನ ಅನುಭವವನ್ನು ಮತ್ತು ಬದುಕಲು ಬೇರೆ ಬೇರೆ ರೀತಿಯಾದ ದಾರಿಗಳಿದೆ ಎಂದು ಹೆಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೀವಿಸಲು ಕಲಿಸಬೇಕೇ ವಿನಃ, ಜೀವನ ಪೂರ್ತಿ ಒದ್ದಾಡಲು ಅಲ್ಲ !!