ಬಯಲು

ಬಯಲು’ ಎಂಬ ಕನ್ನಡ ಪದ ವಿಶಾಲವಾದ ತೆರೆದಜಾಗ, ಸಮತಟ್ಟಾದ ನೆಲ ಮತ್ತು ಬಯಲು ಎಂದು. ಇದು ತೆರೆದ ಮನಸ್ಸನ್ನು, ಉನ್ನತ ದೃಷ್ಠಿಯನ್ನು, ಕಣ್ಣಿಗೂ ಮನಸ್ಸಿಗೂ ಸಿಗುವ ಎಲ್ಲ ಚೆಲುವನ್ನು, ಪ್ರಕಾಶವನ್ನು, ವಿಶಿಷ್ಠತೆಯನ್ನೂ, ಒಂದು ಶೂನ್ಯವನ್ನು, ಅದೃಶ್ಯವನ್ನು, ಅನಂತವು ಬೆಳಕಿಗೆ ಬರುವುದನ್ನೂ ಹೇಳುತ್ತದೆ.

ಬಯಲು ಬಹಳ ಸುಂದರವಾದ ಜಾಗ. ಒಬ್ಬ ಚೆಲುವಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತ, ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆಯುತ್ತಾ ಮೆಲ್ಲಗೆ ತನ್ನ ಕಿರುನೋಟವನ್ನು ಒಂದೇ ಒಂದು ಕ್ಷಣ ತನ್ನಮೇಲೇ ಹರಿಸಿ, ಯಾರೂ ತನ್ನನ್ನು ಗಮನಿಸಿಲ್ಲವೆಂದು ವೈಯ್ಯಾರ ಮಾಡಿ, ನುಲಿಯುತ್ತಾ ಆನಂದ ಪಡುವ ರೀತಿ ಬಯಲುಸೀಮೆ ಭೂಮಿಯು ಉಟ್ಟ ಸುಂದರಾತಿಸುಂದರ ಬಣ್ಣದ ಸೀರೆ!

ತೀಕ್ಷ್ಣವಾದ ಬಿಸಿಲು ಬಯಲನ್ನು ಬಿಸಿಮಾಡಿ ಸುಡುತ್ತದೆ, ತಂಪಾದ ಬೆಳದಿಂಗಳು ಬೆಳಗಿನ ಧಗೆಯನ್ನು ದೂರಮಾಡಿ ಮತ್ತೆ ಬೆಳಗಿನಜಾವದ ಹೊತ್ತಿಗೆ ‘ಕೊಳೆಯಾದ ಮಗುವನ್ನು ತಾಯಿ ಸ್ನಾನ ಮಾಡಿಸಿ ‘ ಆಡಲು ಮತ್ತೆ ತಯಾರು ಮಾಡಿದಂತೆ ತಂಪಾದ ಮಂಜಿನ ಹನಿಗಳು ಬಯಲನ್ನು ನವಿರು ಮಾಡುತ್ತದೆ. ಬಿರುಗಾಳಿ ಬೀಸಿದಾಗ ರುದ್ರ ರಮಣೀಯವಾಗುವ ಬಯಲು ಧೂಳನ್ನು, ಕಸವನ್ನು ಮೇಲಕ್ಕೆ ಎಸೆದು ಭೂಮಿಗೆ ಅಪ್ಪಳಿಸಿ, ಅಲ್ಲಿರುವ ಗಿಡ-ಮರ, ಹೊ-ಬಳ್ಳಿ , ಪ್ರಾಣಿ-ಪಕ್ಷಿಗಳನ್ನು ಧೂಳಿನಲ್ಲಿ ಮುಚ್ಚುತ್ತದೆ.


ಬಿರುಗಾಳಿಗೆ ಒಡೆದು ಚೂರಾಗುವ ಹಕ್ಕಿ ಗೂಡುಗಳು, ಛಿದ್ರ-ಛಿದ್ರವಾಗುವ ಪುಟ್ಟ-ಪುಟ್ಟ ಮೊಟ್ಟೆಗಳು, ಗಿಡ-ಮರ, ಪ್ರಾಣಿ-ಪಕ್ಷಿ, ಮನೆ-ಮನ ಇವೆಲ್ಲವನ್ನು ಬುಡಮೇಲು ಮಾಡುವ ಬಿರುಗಾಳಿ ತಣ್ಣಗಾದ ನಂತರ ತಾನು ಮಾಡಿದ ಅನಾಹುತಗಳನ್ನು ಪಶ್ಚಾತಾಪದಿಂದ ಪರಿತಪಿಸುತ್ತ್ತಾ ಇರುವಾಗ, ಸಣ್ಣ ತುಂತುರು ಮಳೆಬಂದು ತಿಳಿಯಾದ ಮಳೆಯಾಗಿ, ಮೇಲೆ ಎದ್ದಿದ್ದ ಬಿರುಗಾಳಿಯಿಂದ ಧೂಳಿನಮಯವಾಗಿದ್ದ ಗಿಡ-ಮರಗಳನ್ನು ತೊಳೆದಾಗ ಭೂಮಿಯ ಬಯಲು ಕಡು ಹಸಿರಿನಿಂದ ಕಂಡು ಅದನ್ನು ಅನುಭವಸಿ ಆಹ್ಲಾದಿಸಿದವರೇ ಧನ್ಯರು. ಇಲ್ಲಿಗೆ ನಿಲ್ಲದೇ ಆ ಮಣ್ಣಿನ ವಾಸನೆ ಎಲ್ಲೆಡೆ ಹರಡುತ್ತಾ ಬದುಕಿನ ನಿಜವಾದ ಗಂಧವನ್ನು ಸೂಸುತ್ತಿದ್ದರೆ, ಹೇಗೆ ಬಣ್ಣಿಸಲು ಸಾಧ್ಯ? ಹೋಲಿಸಲು ಯಾವ ಹೋಲಿಕೆಯು ನನ್ನಲ್ಲಿಲ್ಲ.

ನನ್ನ ಅನುಭವದಲ್ಲಿ ಮಣ್ಣಿನ ವಾಸನೆಯೇ ಬಯಲ ಗಂಧ, ಆತ್ಮದ ಗಂಧ !