
ಬೇಲಿಯ ಹೂವು ಏರದು ಮುಡಿಗೆ, ಬಣ್ಣದ ಹೂವದು ಕಾಣದು ಹೊರಗೆ
ನೋಡಿತು ನೋಡುತ ನಲಿಯುತ ಹೇಳಿತು, ಸಂತಸ ಒಳಗಿದೆ ಹೊರಗಿಲ್ಲೆಂದಿತು
ಗಿಡದಲೆ ಮೊಳೆತು, ಗಿಡದಲೆ ಅರಳಿ, ಸಸ್ಯದ ಸಾರವ ಹೀರುವೆ ನಾನು
ಬಾಡುವವರೆಗು ಸೃಷ್ಟಿಯ ಸಾರವ ಅಡೆ-ತಡೆ ಇಲ್ಲದೆ ಸವಿಯುವೆನೆಂದಿತು
ನನ್ನನು ಯಾರು ನೋಡಿದರೇನು?, ಮಾತನಾಡಿಸದೆ ಹೋದರೆ ಏನು?
ಸೂರ್ಯನ ಶಾಖದಿ, ಗಾಳಿಯ ಸ್ಪರ್ಶದಿ, ಮಂಜಿನ ಹನಿಯಲಿ ತೋಯುವೆನೆಂದಿತು
ಚಿಲಿಪಿಲಿಗುಟ್ಟುತ, ಚೀರುತ ಹಾರುವ ಹಕ್ಕಿಯ ಬಳಗವೆ ನನ್ನಯ ಆಪ್ತರು
ಬಳುಕುತ ಬಳಸಿಹ ಬಳ್ಳಿಗಳೆಲ್ಲವು ಮಾತನು ಹರಟುವ ಮಿತ್ರರು ಎಂದಿತು
ಯಾರಿಗು ಕಾಣದೆ ಮರೆಯಲಿ ಬೆಳೆವನು, ಎಂದಿಗು, ಯಾರಿಗು ನೋವನು ಬಯಸೆನು
ನಸು ನಸು ನಗುತಾ, ಎಲ್ಲೋ ಹಾರುವ ದುಂಬಿಯ ಸಂಗವ ಕಾಯುವೆನೆಂದಿತು
ಬೇಡವು ನನಗೆ ದೇವರ ಗುಡಿಯು, ತಾಗದು ನನಗೆ ಮನುಜರ ಮುಡಿಯು
ತನು-ಮನ ನಡೆ-ನುಡಿ ಬೇಲಿಗೆ ಸೀಮಿತ, ಬಯಲಲಿ ಬಾಡದೆ ಸೇರುವೆನೆಂದಿತು