ಯುಗ ಯುಗಾದಿ ಕಳೆದರೂ

D.R.Bendre
– ದ . ರಾ . ಬೇಂದ್ರೆ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೆ

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವಿನ ಜನನ
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೂ

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

Leave a Reply

Your email address will not be published. Required fields are marked *