ಎಷ್ಟು ಬರುತ್ತೆ ನಿಂಗೆ ಸಂಬಳ ತಿಂಗಳಿಗೆ?

ಮೈಸೂರಿನ ಒಂದು ನೆಚ್ಚಿನ ತಾಣದಲ್ಲಿ ನನ್ನ ಆಪ್ತ ಸ್ನೇಹಿತನ ಜೊತೆ (ನಾವಿಬ್ಬರೂ ಮಧ್ಯ-ವಯಸ್ಕರು  🙂 ) ಸಂಜೆ ೭ (7) ಗಂಟೆ, ನಮ್ಮ ಎಲ್ಲ ಹತಾಶೆಗಳನ್ನು, ಜಗತ್ತಿನ ತಪ್ಪುಗಳನ್ನು, ಸಂಸಾರದ ಸಂಕಷ್ಟಗಳನ್ನು, ನಮ್ಮ ಸರಿಗಳನ್ನು ಮಾತನಾಡುತ್ತ ಕುಳಿತಿದ್ದೆವು.

ನಮಪ್ಪ-ನಮ್ಮಮ್ಮನ ಕಾಲದಲ್ಲಿ ಹೊರಗೆ ತಿನ್ನುವುದೇ ಮಾಹಾ ತಪ್ಪು ಎಂದು ತಿಳಿಯುತಿದ್ದ ಕಾಲ, ಕೆಲಸ ಮಾಡದೆ ಸೋಮಾರಿಗಳಾಗುತ್ತೀರಾ ಎಂದು ನಮ್ಮನ್ನು ಬಯ್ಯುತ್ತಿದ್ದ / ಕೇಳುತ್ತಿದ್ದ ಕಾಲ.  ಈಗ swiggi / zomato ಗಳು ಬಂದು ‘ಮನೆಯಿಂದ ಹೊರಗೆ ಬರಬೇಡಿ, ನಾವೇ ನಿಮಗೆ ತಂದು ನೀವು ಕುಳಿತಿರುವ ಜಾಗಕ್ಕೆ ತಿನ್ನಲು ತಂದುಕೊಡುತ್ತೇವೆ‘ ಎಂದು ಹೇಳುತ್ತಿರುವ swiggi / zomato ದಿನಗಳು.  ನಮ್ಮ ಕಣ್ಣಮುಂದೆ ನಮ್ಮನ್ನೇ ಸುತ್ತಿಕೊಂಡು ಕಳೆಯುತ್ತಿವೆ. ನಾವು ಈ ಪರಿಕಲ್ಪನೆಯನ್ನು (concept ), ೨೦೧೪ ಮಾಡಿ ವಿಳಂಬ ಪ್ರವೃತ್ತಿಯನ್ನು (procrastination) ಬೆಳೆಸಿಕೊಂಡು, ನಮ್ಮ fudbook (ಈಗಿನ zomato / swiggy ತರಹದ ತಂತ್ರಜ್ಞಾನ) ತರಲಾಗದೆ ಮಾಡಿದ ತಪ್ಪುಗಳನ್ನು ನೆಪಮಾಡಿಕೊಂಡು ಎಲ್ಲವನ್ನೂ ನೆನೆಯುತ್ತಾ ಸುರೆಯ ಹೀರುತ್ತಿರುವ ಸಮಯ.  

ನಾವು ಕುಳಿತಿದ್ದ ಜಾಗಕ್ಕೆ  ಆಸರೆಯಾಗಿ ನಿಂತಿದ್ದ ಹಳೆಯ ಕಾಯಿಬಿಟ್ಟಿದ ಮಾವಿನ ಮರ ನಮ್ಮನ್ನು ‘ಕುಡುಕರು’ ಎಂದು ಅಣಕಮಾಡುತ್ತ ತನ್ನ ದೇಹಕ್ಕೆ ಮಿನಿಗುವ ಸೀರಿಯಲ್ ಸೆಟ್ ಹಾಕಿಸಿಕೊಂಡು ಬೀಗುತ್ತಿತ್ತು.  ಮಳೆ ಬರುವ ಸೂಚನೆಗಳು ಬಹಳ ಇದ್ದರೂ ಸೈಕ್ಲೋನ್ ಗಾಳಿಗೆ ಮೋಡಗಳೆಲ್ಲ ಚದುರಿದವು. ಮಳೆಯನ್ನೇ ನೆಚ್ಚಿಕೊಂಡ ರೈತ ಮಳೆ ಕೈತಪ್ಪಿತಲ್ಲ ಎಂದು ರೋಧಿಸುತ್ತಿರುವ ವೇಳೆಯಲ್ಲಿ, ಸಧ್ಯ ಮಳೆ ಬರಲಿಲ್ಲವಲ್ಲ ಇಲ್ಲವಾದಲ್ಲಿ ನಾನು ‘ಎಣ್ಣೆ ಹೊಡೆದು’ (ಮಧ್ಯಪಾನ ಮಾಡಿ) ನೆನೆಯುತ್ತಾ ಮನೆಗೆ ಹೋಗಬೇಕಿತ್ತಲ್ಲ ಎಂದು ಇನ್ನೊಂದು ಪೆಗ್ ಏರಿಸಲು ಜನ ಯೋಚಿಸುತ್ತಿದ್ದರು.  

ನೀರಿನಲ್ಲಿ ಸಣ್ಣ ಮೀನಿನ ಹಿಂಡು ಹಠಾತ್ತಾಗಿ ದಿಕ್ಕು ಬದಲಿಸುವ ರೀತಿಯಲ್ಲಿ ನಾವು ನಮ್ಮ ಚರ್ಚೆಯ ವಿಷಯವನ್ನು ದುಡ್ಡಿನ ಕಡೆಗೆ ಹರಿಸಿದೆವು.  ಜಗತ್-ಪ್ರಸಿದ್ಧ ಚರ್ಚೆಯಾದ ‘ದುಡ್ಡಿನ ಮಹತ್ವವನ್ನು’ ಸುರೆಯೇರಿದ ಮನಸ್ಸಿಗೆಬಂದ ರೀತಿಯಲ್ಲಿ, ಸುರೇಹೀರಿದ ಬಾಯಿಗೆ ಸಿಕ್ಕ ರೀತಿಯಲ್ಲಿ ಮಾತಾಡಹತ್ತಿದೆವು.  

ಯಾವ ಅಂಶವನ್ನೂ ಬಿಟ್ಟಿಲ, ಮೋದಿಯ ನೋಟ್-ಬಂದಿ, HAL ನಿಂದ  ರೆಫಾಲ್ ಕೆಲಸ ಕಸಿದ ರಿಲಯನ್ಸ್ (Reliance), ಜೆಟ್ ಏರ್ವೇಸ್ (Jet Airways) ಸಂಬಳ ಕಡಿತವಾದ ನೌಕರರ ಪರಿಸ್ಥಿತಿ, GDP ಏರಿಳಿತ, ಕೋಮುವಾದಿ ಸರ್ಕಾರದ ರೈತ ದೋರಣೆ, ನೌಕರಿ ಸಿಗದೇ ದುಡ್ಡಿನ ಮುಖ ಕಾಣದ ಯುವಕರು, ಸಮಾಜವಿರೋಧಿ ಸಂಘಗಳ ದುಡ್ಡಿನ ಧಾರಾಳತನ, ಆದಾಯ ತೆರಿಗೆಯಲ್ಲಿ (Income tax ) ಮುಳುಗಿದ ಖಾಸಗೀ ಕಂಪನಿ ನೌಕರರ ಮುಕ್ಕಾಟ, ರಾಜಕಾರಣಿಗಳ ದುಡ್ಡಿನ ಹೊಳೆ, ಸಿನಿಮಾ ನಿರ್ಮಾಪಕರ ದುಡಿಮೆ, ಭಾರತೀಯ ಕ್ರಿಕೆಟ್ ಆಟಗಾರರ ಆದಾಯ, ಟಿ.ವಿ ಪ್ರಪಂಚದ ಆದಾಯ, ಸರ್ಕಾರೀ ನೌಕರರ ಪರದಾಟ, ಬ್ಯಾಂಕ್ ಗಳ ದಬ್ಬಾಳಿಕೆ, ಶಾಲಾ-ಕಾಲೇಜುಗಳ ಹಣಮಾಡುವ ವಿಧಾನ ಒಂದೇ ಎರಡೇ …

ಮನೆ ಕಟ್ಟಬೇಕಿದೆ .. ಹಣ ಬೇಕು
ಮದುವೆ ಮಾಡಬೇಕಿದೆ .. ಹಣ ಬೇಕು
ಮಕ್ಕಳನ್ನು ಓದಿಸಬೇಕಿದೆ .. ಹಣ ಬೇಕು
ಮಗಳ ಹೆರಿಗೆಗೆ ಓಡಾಡಬೇಕಿದೆ .. ಹಣ ಬೇಕು
ಕಾರ್ ಸರ್ವಿಸ್ ಮಾಡಿಸಬೇಕಿದೆ .. ಹಣ ಬೇಕು
ಮಕ್ಕಳಿಗೆ ಪಾಕೆಟ್-ಮನಿ ಕೊಡಬೇಕಿದೆ .. ಹಣ ಬೇಕು
ತಿಂಗಳಿಒಮ್ಮೆ ಮನೆಯವರೆಲ್ಲರನ್ನೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗಬೇಕಿದೆ .. ಹಣ ಬೇಕು
ಆಗಾಗ ಸ್ನೇಹಿತರೊಟ್ಟಿಗೆ ಮಧ್ಯಪಾನ ಮಾಡಬೇಕಿದೆ .. ಹಣ ಬೇಕು

ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಬೇಕಿದೆ .. ಹಣ ಬೇಕು
ಇಂಗ್ಲಿಷ್ ಪೇಪರ್ ಬೇಕಿದೆ .. ಹಣ ಬೇಕು
ಗಟ್ಟಿ ಹಾಲು / ಮೊಸರು ಬೇಕಿದೆ .. ಹಣ ಬೇಕು
ಒಳ್ಳೆಯ ತರಕಾರಿ / ಸೊಪ್ಪು ಬೇಕಿದೆ .. ಹಣ ಬೇಕು
ಹೊಸ ಬಟ್ಟೆ / ಉಡಿಗೆ ಬೇಕಿದೆ .. ಹಣ ಬೇಕು
ಮೊಬೈಲ್ ಫೋನ್ ಬೇಕಿದೆ .. ಹಣ ಬೇಕು
ಮೊಬೈಲ್ ರಿಚಾರ್ಜ್ ಮಾಡಬೇಕಿದೆ .. ಹಣ ಬೇಕು
ಟಿವಿ ಚಾನೆಲ್ ರಿಚಾರ್ಜ್ .. ಹಣ ಬೇಕು
ನೀರು / ವಿದ್ಯುತ್ ಬಳಕೆ .. ಹಣ ಬೇಕು
ಅಡುಗೆ ಗ್ಯಾಸ್ ಬಳಕೆ .. ಹಣ ಬೇಕು

ಮಕ್ಕಳಿಗೆ ಸ್ಕೂಲ್ ವ್ಯಾನ್ .. ಹಣ ಬೇಕು
ಮನೆ ಕಟ್ಟಿದ್ದರೆ ಸಾಲ ತೀರಿಸಬೇಕಿದೆ .. ಹಣ ಬೇಕು
ಮನೆಗೆ ಫರ್ನಿಚರ್ ಗಳು .. ಹಣ ಬೇಕು
ವರ್ಷಕ್ಕೆ ಒಮ್ಮೆ ಎಲ್ಲರನ್ನೂ ಕರೆದುಕೊಂಡು ಟೂರ್ ಮಾಡಬೇಕಿದೆ .. ಹಣ ಬೇಕು
ಮಕ್ಕಳ ಉತ್ತಮ ಓದಿಗಾಗಿ/ಒಳ್ಳೆಯ ಯೂನಿವೆರ್ಸಿಟಿಗಳಿಗಾಗಿ .. ಹಣ ಬೇಕು
ಸೈಟ್ ಮಾಡಬೇಕಿದೆ .. ಹಣ ಬೇಕು
ಇನ್ಸೂರೆನ್ಸ್ (Insurence) ಕಟ್ಟಬೇಕಿದೆ .. ಹಣ ಬೇಕು
ದ್ವಿಚಕ್ರ ವಾಹನ ಬೇಕಿದೆ .. ಹಣ ಬೇಕು
ಪೆಟ್ರೋಲ್ / ಡಿಸೇಲ್ ಬೇಕಿದೆ .. ಹಣ ಬೇಕು
ಆಗಾಗ ಆರೋಗ್ಯ ಕೆಟ್ಟರೆ, ಆಸ್ಪತ್ರೆಗೆ .. ಹಣ ಬೇಕು
ಜಿಮ್ / ಯೋಗ / ಸ್ಪೋರ್ಟ್ಸ್ ಕ್ಲಬ್ ಗೆ .. ಹಣ ಬೇಕು
ಲ್ಯಾಪ್-ಟಾಪ್, ಟ್ಯಾಬ್, ಮ್ಯೂಸಿಕ್ ಪ್ಲೇಯರ್ ಬೇಕಿದೆ .. ಹಣ ಬೇಕು
ಆಗಾಗ ಸಣ್ಣ ಪುಟ್ಟ ಶಾಪಿಂಗ್ ಮಾಡಬೇಕಿದೆ .. ಹಣ ಬೇಕು

ಈ ಮೇಲಿನ ಖರ್ಚು ಎಲ್ಲ ವರ್ಗದ ಜನರಲ್ಲಿಯೂ ಇರುತ್ತದೆ, ಇದನ್ನು ನಿಭಾಯಿಸುವ ಬಗ್ಗೆ ನಮ್ಮ ಮಕ್ಕಳಿಗೆ ಶಾಲೆ ಕಾಲೇಜುಗಳಲ್ಲಿ ತಿಳಿಸುವುದು ಅಗತ್ಯ ಮತ್ತು ನಾವು ನಮ್ಮ ಮಕ್ಕಳಿಗೆ ಹಣವೇ ಮುಖ್ಯ, ಹಣ ಮಾಡಲು ಮಾತ್ರ ಹೇಳುತ್ತಿದ್ದೇವೆ, ಹಣದ ನಿರ್ವಹಣೆ ಹೇಳುತ್ತಿಲ್ಲ ಎಂದು ನನ್ನ ಬಲವಾದ ನಂಬಿಕೆ.

ನಾವು ಎಲ್ಲಿ ಸಾಗುತ್ತಿದ್ದೇವೆ  ತಿಳಿಯುತ್ತಿಲ್ಲ. ನನ್ನ ಪಕ್ಕದವನನ್ನು ನೀನು ಎಲ್ಲಿ ಹೋಗುತ್ತಿದ್ದಿಯ? ಎಂದು ಕೇಳಿದರೆ ‘ಗೊತ್ತಿಲ್ಲ, ಎಲ್ಲರೂ ಹೋಗುತ್ತಿದ್ದಾರೆ, ನಾನೂ ಹೋಗುತ್ತಿದ್ದೇನೆ  ಎನ್ನುತ್ತಾನೆ ಈಗಲೂ ಕೂಡ ಮಕ್ಕಳಿಗೆ ಡಾಕ್ಟರ್, ಇಂಜಿನಿಯರ್ ಪದವಿ / ವೃತ್ತಿಯ ಬಗ್ಗೆ ಮಾತ್ರ ಅರಿವು ಮೂಡಿಸುತ್ತಿದ್ದೇವೆ, ಇದು ನನ್ನ ಕಾಲಕ್ಕೆ ಮುಗಿಯಿತು, ಎಲ್ಲರೂ ಡಾಕ್ಟರ್ / ಇಂಜಿನಿಯರ್ ಆಗಬೇಕಿಲ್ಲ ಎಂದು ಮುಂದಿನ ಪೀಳಿಗೆಯ ಜನ ತಿಳಿಯುತ್ತಾರೆ  ಎಂದು ತಿಳಿದ್ದಿದ್ದೆ 🙂

ಎಲ್ಲ ಕೆಲಸಕ್ಕೂ ಮೂಲ ಕಾರಣ ‘ಹಣ’ ಎಂದು ತೀರ್ಮಾನವಾಯಿತು.  ಸರಿ ನಾವು IT ಕಂಪನಿಗಳಲ್ಲಿ ಸ್ವಘೋಷಿತ ಗೌರವಾನ್ವಿತ ಸ್ಥಾನದಲ್ಲಿ ದುಡಿಯುತ್ತಿದ್ದೇವೆ, ೨೦(20) ವರ್ಷಗಳಾಯಿತು ದುಡಿಯಲು ಶುರುಮಾಡಿ ಏನು ಮಾಡಿದ್ದೇವೆ – ‘ದುಡ್ಡಿನ ಹಿಂದೆ ಓಡಿದ್ದೇವೆ ಅಷ್ಟೇ‘.. ಚೀರ್ಸ್ (cheers), ಎಂದು ಹೇಳುತ್ತಾ ಒಬ್ಬರನೊಬ್ಬರು ನೋಡಿದೆವು…  ಮುಂದೆ ??

ಸರಿ ಅತ್ತ-ಇತ್ತ ಸುತ್ತ-ಮುತ್ತ ನೋಡುತ್ತೇವೆ, ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ. ಒಂದು ನಮ್ಮ ಅವತಾರ, ಮತ್ತೊಂದು ನಮ್ಮ ಚರ್ಚೆಯ ವಿಷಯ.  ಸುತ್ತ ಕತ್ತಲೆಯ ನಡುವೆ ದೀಪಬೆಳಗಿದ ಹಾಗೆ ನಮ್ಮ ಚರ್ಚಾ-ಪ್ರಭಾವಳಿ ಎಲ್ಲರನ್ನು ಆಕರ್ಷಣೆ ಮಾಡಿತ್ತು, ಇನ್ನು ಸ್ವಲ್ಪ ಕಾಲ ಚರ್ಚೆ ನಡೆದಿದ್ದರೆ ಅದರ ಝಳಪು ನಮಗೆ ತಗಲುತ್ತಿದ್ದುದು ಖಂಡಿತ. 🙂

ದೇಹ ಹಗುರಮಾಡಲು ಒಳಗೆ ಇದ್ದ ಸಣ್ಣದಾದ ಶೌಚಕ್ಕೆ ಕಾಲಿಟ್ಟು ನಿಟ್ಟುಸಿರು ಬಿಡುವಾಗ ಹೊರಗಿನಿಂದ ಹೆಣ್ಣು ಧ್ವನಿಗಳೆರಡು ಕೇಳಿಸಿತು.  ನಾವು ಹೊಕ್ಕ ಹೋಟೆಲ್ಲಿನಲ್ಲಿ ಪಾತ್ರೆ ತೊಳೆಯಲು ಬಂದಿದ್ದ ಮಂದಿಯ ಪೈಕಿಯಲ್ಲಿ ಇವರಿಬ್ಬರು ಹೆಂಗಸರು ಮಾತನಾಡಿಕೊಳುತ್ತಿದರು ‘ಎಷ್ಟು ಬರುತ್ತೆ ನಿಂಗೆ ಸಂಬಳ ತಿಂಗಳಿಗೆ?‘ ಬೇರೆಕಡೆ ಕೆಲಸ ಮಾಡಿದರೆ ಎಷ್ಟು ಸಿಗಬಹುದು (ಮೆಲು ಧ್ವನಿಯಲ್ಲಿ ) ?

ಒಳಗೆ ನಿಂತ ನಾನು, ಹೊರಗೆ ನಾವು ಆಡಿದ ಮಾತಿಗೂ, ಇವರಿಬ್ಬರು ಆಡುತ್ತಿದ್ದ ಮಾತಿಗೂ ಹೋಲಿಕೆ ಮಾಡುತ್ತಾ ‘ದುಡ್ಡು ಏನೆಲ್ಲಾ ಮಾಡಿಸುತ್ತದೆ !ಎಂದು ಯೋಚಿಸುತ್ತಿರುವಷ್ಟರಲ್ಲಿ ಬಾಗಿಲು ಜೋರಾಗಿ ಬಡಿದ ಶಬ್ದವಾಯಿತು.  ಆಗ ನಾನು ಓ ಇದು ನನ್ನದೊಬ್ಬನ ಸ್ವತ್ತಲ್ಲ !ಜನ ಪಾಳಿಯಲ್ಲಿ ನಿಂತ್ತಿದ್ದಾರೆ ಎಂದು ಹೊಳೆಯಿತು, ಹೊರಟೆ.

Leave a Reply

Your email address will not be published. Required fields are marked *