ಓ ಅಪ್ಪ ಬಂದರು ಕಥೆ ಹೇಳುತ್ತಾರೆ !!!

ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಒಂದು ಸಣ್ಣ ವಿಷಯವನ್ನು ನನ್ನಿಂದ ನಿರ್ವಹಿಸಲಾಗಲಿಲ್ಲವಲ್ಲ ಎಂದು. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಚಿಂತೆಮಾಡುತ್ತ ಅವರು ಮಾಡುತ್ತಿರುವ ತಪ್ಪುಗಳನ್ನು ತಿದ್ದುವ ವಿಧಾನವನ್ನು ಕಂಡುಹಿಡಿದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ನಡೆದದ್ದು ಹೀಗೆ ! ದೊಡ್ಡಮಗ ತಪ್ಪು ಮಾಡಿದ್ದಾನೆ, ಅವನ ಅಮ್ಮ ಅದನ್ನು ಸರಿಯಿಲ್ಲ ಎಂದು ಪ್ರಶ್ನಿಸಿದ್ದಾಳೆ, ಅವಳು ಪ್ರಶ್ನಿಸಿರುವ ರೀತಿ ಸರಿಯಿಲ್ಲ, ಮಗನ ಮನಸ್ಸಿಗೆ ನೋವಾಗಿದೆ ಅವನು ಹಿಂತಿರುಗಿ ಬಿದ್ದಿದ್ದಾನೆ. ಇಬ್ಬರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲಿಲ್ಲ.

ಮಗನಿಗೆ ಸಿಟ್ಟುಬರಲೇಬಾರದು ಎಂದು ಅಮ್ಮ, ಅಮ್ಮ ನನಗೆ ತಾರತಮ್ಯ ಮಾಡುತ್ತಿದ್ದಾಳೆ ಎಂದು ದೊಡ್ಡ ಮಗ. ಸಣ್ಣವನು ಮಾತ್ರ ಸರಿ ದೊಡ್ಡವನು ನನ್ನ ಮಗನಲ್ಲ ಎಂದು ಅಮ್ಮ ಇಬ್ಬರ (ಸಣ್ಣ ಮಗ, ದೊಡ್ಡ ಮಗ) ಮುಂದೆ ಜೋರಾಗಿ ಕೂಗಾಡಿದ್ದಾಳೆ. ಇದನೆಲ್ಲ ನೋಡಿದ್ದ, ನೋಡುತ್ತಿದ್ದ ಅಪ್ಪ ಸಹನೆ ಕಳೆದುಕೊಂಡು ಹೆಂಡತಿಗೆ ಬೈದಿದ್ದಾನೆ. ವಿಷಯ ತಾರಕಕ್ಕೇರಿದೆ. ದೊಡ್ಡಮಗ ಸರಿಯಾಗಿ ಓದುತ್ತಿಲ್ಲ ಅವನು ದಡ್ಡ, ಕೆಟ್ಟಾದಾಗಿ ಹೇರ್-ಕಟ್ ಮಾಡಿಸಿಕೊಂಡಿದ್ದಾನೆ ಅವನು ಹಾಳಾಗುತ್ತಿದ್ದಾನೆ ಹೀಗೆಲ್ಲ ಅವರಮ್ಮ ರೇಗಾಡಿದ್ದಾಳೆ. ನಾಳೆಯಿಂದ ನಾನು ಈ ಮನೆಯಲ್ಲಿ ಇರುವುದಿಲ್ಲ, ಈ ಕೋಣೆಯಲ್ಲಿ ಮಲಗುವುದಿಲ್ಲ, ದೊಡ್ಡಮಗನನ್ನು ಮಾತಾಡಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ. ಎಲ್ಲರಿಗೂ ಉಪದೇಶ ಮಾಡುತ್ತಿದ್ದ ಗಂಡ ತಾನೇ ತಾಳ್ಮೆ ಕಳೆದುಕೊಂಡು ಎಲ್ಲರಮೇಲೂ ರೇಗಿದ್ದಾನೆ. ಎಲ್ಲರೂ ಬೇಸರದ ಮನಸ್ಸಿನಿಂದ ನೊಂದಿದ್ದಾರೆ.

ಸಣ್ಣಮಗ ಅಪ್ಪ ಮಲಗುವ ಕೋಣೆಗೆ ಬಂದಕೂಡಲೇ ‘ಓ ಅಪ್ಪ ಬಂದರು ಕಥೆ ಹೇಳುತ್ತಾರೆ’ ಎಂದು ಸಂತೋಷದಿಂದ ಇರುವ ಹೊತ್ತು ಮೀರಿದೆ, ಮೀರಿ ನಕಾರಾತ್ಮಕ ಸನ್ನಿವೇಶ ಹುಟ್ಟಿಸಿದೆ. ಹೆಂಡತಿ ‘ತನ್ನ ವಿಚಾರವನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕೊರಗುತ್ತಿದ್ದಾಳೆ, ಗಂಡನ ಮನಸ್ಸಿನಲ್ಲಿ ಮೇಲೆ ಬರೆದ ಎಲ್ಲ ವಿಚಾರಗಳೂ ಓಡಾಡುತ್ತಿವೆ, ಕೂಗುತ್ತಿವೆ, ರೋದಿಸುತ್ತಿವೆ, ಚೂಪಾಗಿ ನಾಟುತ್ತಿವೆ! ಯಾರಿಗೂ ಹೇಳದೆ ದೊಡ್ಡಮಗ ಒಳಗೆ ಅಳುತ್ತ ಮಲಗಿದ್ದಾನೆ, ಸಣ್ಣಮಗ ಭಯ-ತಲ್ಲಣಗಳಿಂದ ಕಥೆಯ ಕನಸು ದೂರಮಾಡಿ ಮುದುರಿಕೊಂಡು ಮಲಗಿದ್ದಾನೆ.

ಒಂದೇ ಒಂದು ಕ್ಷಣದ ಹಿಂದೆ ಸುಂದರವಾಗಿದ್ದ ಸಂದರ್ಭ / ಸನ್ನಿವೇಶ ‘ಜೀವಿಸಲಸಾಧ್ಯ’ ಎನ್ನುವಷ್ಟರ ಮಟ್ಟಿಗೆ ತಿರುಗಿದೆ ! … ಸಂಸಾರ !!! 🙂

Leave a Reply

Your email address will not be published. Required fields are marked *