ಸಂಖ್ಯೆಗಳು ಅಂಕಗಳಿಗಷ್ಟೇ ಸೀಮಿತವಲ್ಲ!

೧೯೯೩ (1993), ನನ್ನ  ಮನೆಯ ಮೇಲೆ ನಾನು, ನನ್ನ ಗೆಳೆಯರಾದ ಗುರುರಾಜ, ಶಿವಪ್ರಕಾಶ ಎಲ್ಲರೂ ೨ನೇ (2ನೇ) PUC ಪರೀಕ್ಷೆಗಾಗಿ ಕೂಡು-ಅಧ್ಯನ (combined study) ನಡೆಸಿದ್ದೆವು.

ಮನೆಯ ಮುಂದೆ ನನ್ನ ಕಾಲೇಜಿನ ಆಟದ ಮೈದಾನ (ಕಾಲೇಜು ಕಟ್ಟಡದ ಹಿಂದಿನ ಭಾಗ), ಮೈದಾನಕ್ಕೆ ತೆರೆದಂತೆ ನನ್ನ ಮನೆ (ಅಪ್ಪನ ಮನೆ :)).  ಮನೆಯ ಮುಂದೆ ಪೊಲೀಸ್ ಕ್ವಾರ್ಟ್ರಸ್ ನಿಂದ ನೇರವಾಗಿ ಬರುವ ಮಣ್ಣಿನ ರಸ್ತೆ, ರಸ್ತೆಯ ಒಂದು ಬದಿ ಮನೆಗಳು, ಮತ್ತೊಂದು ಬದಿ ಪಾರ್ಥೇನಿಯಂ ಗಿಡಗಳಿಂದ ಕೂಡಿದ, ಕಾಲೇಜು ಮೈದಾನಕ್ಕೆ ಅಂಟಿಕೊಂಡ ಮುಳ್ಳಿನ ಬೇಲಿ.

ಮನೆಯ ಮೇಲಿನ ಸಣ್ಣ ಗೋಡೆಯನ್ನೊರಗಿ ಭಾಷ ಮಾಸ್ತರರ ಗಣಿತದ ನೋಟ್ಸ್ ನೋಡುತ್ತಾ ಮಾತಾಡುತ್ತಿದಾಗ ದಿಢೀರನೆ ನನ್ನ ಕಣ್ಣು ನಾವು ಹತ್ತಿಬಂದ ಹೊರಗಿನ ಮಹಡಿಯ ಬಳಿ ಹೋಯಿತು.  ಶ್ರೀ ವೆಂಕಟರಮಣ ಅಂಕಲ್ (ಗುರುರಾಜನ ತಂದೆ) ಬಂದು ನಿಂತಿದ್ದರು.  

ವೆಂಕಟರಮಣ ಅಂಕಲ್ ಶಿಸ್ತಿನ ವ್ಯಕ್ತಿ, ಅವರನ್ನು ಕಂಡರೆ ನಮಗೆಲ್ಲ ಸ್ವಲ್ಪ ಭಯ.  ಒಮ್ಮೆಲೆ ಅವರನ್ನು ಕಂಡಾಗ ನನ್ನ ಎದೆಬಡಿತ ಜೋರಾಯಿತು, ನನ್ನ ಮನಸಿನ್ನಲ್ಲಿ ಮೊದಲ ಪ್ರಶ್ನೆ, ನಾವು ಈ ರೀತಿಯಾಗಿ ಓದುವುದು ಸರಿಯಾಗಿದೆಯಾ?, ಎರಡನೆಯದು, ಗುರು ಈದಿನ ಹೇಳದೆ ಮನೆಯಿಂದ ಬಂದಿದ್ದಾನಾ?, ಮೂರನೆಯದು, ಅವರು ಬಂದು ‘ಎಲ್ಲಿ ಏನು ಓದುತ್ತಿದ್ದಿರಾ ಹೇಳಿ?’ ಎಂದು ಕೇಳಿದರೆ.  ಸ್ವಲ್ಪ ತಡವಾಗಿ ತಿಳಿಯಿತು ನನಗೆ ಅವರು ಬಂದು ೫(5) ನಿಮಿಷಗಳೇ ಆಗಿತ್ತೆಂದು, ಮತ್ತು ಅವರು ಸದ್ದಿಲ್ಲದೇ ನಮ್ಮನ್ನು ಗಮನಿಸುತ್ತಿದ್ದರೆಂದು. ಅವರು ನಿಂತಿರುವ ಪರಿವೆಯೇ ಇಲ್ಲದೆ ನಾನು ಮತ್ತು ಗುರು ಇಬ್ಬರೂ ತಮಾಷೆಮಾಡುತ್ತಾ ಓದದೇ ಹರಟೆ ಮಾಡುತ್ತಿದ್ದೆವು ಎಂದು. ಶಿವಪ್ರಕಾಶ ತನ್ನ ಪಾಡಿಗೆ ತಾನು ಲೆಕ್ಕಗಳನ್ನು ಬಿಡಿಸುತ್ತಿದ್ದ. 

ಒಮ್ಮೆಲೇ ನಾವು ತಲೆ ತಗ್ಗಿಸಿ ಲೆಕ್ಕಗಳನ್ನು ಬಿಡಿಸ ತೊಡಗಿದೆವು.  ಅಂದಿನ ದಿನ ನಮ್ಮ ಕೈಯಲ್ಲಿದ್ದದ್ದು ‘ಬಿ.ಜಿ ಉಮರಾಣಿ ಅಂಡ್ ಉಮರಾಣಿ’ ಬರೆದಿದ್ದ / ಬಿಡಿಸಿದ್ದ ಲೆಕ್ಕದ ಪುಸ್ತಕ.  ನನ್ನ ಎಲ್ಲ ಮಿತ್ರರು ಸೇರಿ ಟ್ಯೂಷನ್ ನಲ್ಲಿ ನಾವು ಮಾತಾಡುತ್ತಿದ್ದ ಈ ಪುಸ್ತಕ ನಮ್ಮನ್ನು ಈದಿನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಎಂದರೆ ಖಂಡಿತ ತಪ್ಪಾಗಲಾರದು.  

ಜ್ಞಾನಮೂರ್ತಿ ನನ್ನ ಮತ್ತೊಬ್ಬ ಆಪ್ತ ಸ್ನೇಹಿತ, ಅವನು ನನಗೆ ಮತ್ತು ನನ್ನ ಗೆಳೆಯರಿಗೆ ಈ ಪುಸ್ತಕ ಪರಿಚಯ ಮಾಡಿಕೊಟ್ಟ ಭಾಷ ಮಾಸ್ತರರ ಸಣ್ಣ ಟ್ಯೂಷನ್ ಕೋಣೆ ಇಂದಿಗೂ ಕಣ್ಣ ಮುಂದೆ ಸುಳಿಯುತ್ತದೆ.  ಭರತ್ (ಈಗ ಡಾಕ್ಟರ್), ಶಿವಪ್ರಕಾಶ (ಈಗ ಆರ್ಕಿಟೆಕ್ಟ್), ಜ್ಞಾನಮೂರ್ತಿ (ಈಗ ಸಿಸ್ಟಮ್ಸ್ ಇಂಜಿನಿಯರ್), ಗುರುರಾಜ (ಈಗ ಬ್ಯಾಂಕ್ ಆಫೀಸರ್) ಹೀಗೆ ಹಲವು ಸ್ನೇಹಿತರು ತಮ್ಮ ಕಾಲೂರಿ ನಿಂತು ನೆಲೆ ಮಾಡಿ ನಿಂತಿದ್ದಾರೆ.  

ಇದು ಉತ್ಪ್ರೇಕ್ಷೆಯಲ್ಲ, ಅಂದು ನಾವುಗಳು ಈ ಪುಸ್ತಕವನ್ನು ಬಹಳವಾಗಿ ಬಳಸಿದ್ದೇವೆ, ನಮಗೆ ಗೊತ್ತಿದ್ದ ಎರಡೇ ಗಣಿತ ಪುಸ್ತಕಗಳು ‘ಬಿ.ಜಿ. ಉಮರಾಣಿ ಅಂಡ್ ಉಮರಾಣಿ’ ಮತ್ತು ‘ಬಾಸ್ಕೋ’.  ನಾನಂತೂ ನನ್ನ Airforce ಕಾಂಪಿಟೇಟಿವ್ ಪರೀಕ್ಷೆಗೆ ಕೂಡ ಈ ಪುಸ್ತಕವನ್ನು ಬಳಸಿದ್ದೆ. ನನಗೆ ಚೆನ್ನಾಗಿ ನೆನಪಿದೆ, ಭಾಷ ಮಾಸ್ತರರ ಟ್ಯೂಷನ್ ನಲ್ಲಿ ನನ್ನ ಇನ್ನೊಬ್ಬ ಸ್ನೇಹಿತ ಸಿ ಲ್ ರಾಘವೇಂದ್ರ ನನಗೆ ಹೇಳಿದ್ದ ‘ಬಿ.ಜಿ. ಉಮರಾಣಿ ಅಂಡ್ ಉಮರಾಣಿ’  ಪುಸ್ತಕ ಓದಿಲ್ವ ನೀನು ? ಅದು ತುಂಬಾ ಲೆಕ್ಕಗಳನ್ನು ಕವರ್ ಮಾಡಿದೆ ಎಂದು. ಈ ಪುಸ್ತಕ ಎಷ್ಟು ವಿಧ್ಯಾರ್ಥಿಗಳ ಭವಿಷ್ಯವನ್ನು ಕಟ್ಟುಕೊಟ್ಟಿದೆ ಎಂದು ನಾನು ಊಹೆಮಾಡಿದರೆ ಇದರ ಸಾರ್ಥಕತೆ ಅನುಭವಾಗುತ್ತದೆ.

ಇದೆಲ್ಲ ನೆನಸಿದಾಗ ನನ್ನ ಕನಸು ಮನಸಿನಲ್ಲೂ ನಾನು ಈ ಪುಸ್ತಕ ಬರದವರನ್ನು ಭೇಟಿ ಮಾಡುತ್ತೇನೆಂದು ಎಣಿಸಿರಲಿಲ್ಲ.  ನನ್ನ ಉದ್ಯೋಗದಲ್ಲಿ ಮುಂದೆ ಶ್ರೀ ಬಿ.ಜಿ ಉಮಾರಾಣಿಯವರ ಮಗನ ಭೇಟಿಯಾಗುತ್ತದೆ ಅವರ ಮಗನ ಪರಿಚಯದ ಮೊದಲನೇ ದಿನವೇ ನಾನು ಅವರನ್ನು ಕೇಳಿದ್ದು ‘ನಿಮ್ಮ ತಂದೆ ಉಮರಾಣಿಯವರ !! ?’

ಬಹಳ ಹೆಮ್ಮೆಪಟ್ಟು ನನ್ನ ಸ್ನೇಹಿತರೊಂದಿಗೆ ಹೇಳಿಕೊಂಡು ತಿರುಗುತ್ತೇನೆ ಉಮರಾಣಿಯವರ ಮಗ ನನ್ನ ಸ್ನೇಹಿತ ಎಂದು !.  

ಮೈಸೂರಿನಲ್ಲಿ ಅವರನ್ನು ಭೇಟಿಮಾಡುವ ಅವಕಾಶ ಬಂದೆ ಬಂತು, ಅವರ ಭೇಟಿ ಎಷ್ಟು ಸರಳವಾಗಿತ್ತೆಂದರೆ ಹದವಾದ ನೀರು ಕುಡಿದಂತೆ.  ಈಗ ಅವರು ನಮ್ಮೊಂದಿಗಿಲ್ಲ ಆದರೆ ಅವರು ನುಡಿದ ಈ ಮಾತುಗಳು ನನ್ನ ಅಂತರಾಳವನ್ನು ಕಲಕಿ, ಬೆದಕಿ ಪ್ರೇರೇಪಿಸುತ್ತಿದೆ ‘ ಸಂಖ್ಯೆಗಳು ಅಂಕಗಳಿಗಷ್ಟೇ ಸೀಮಿತವಲ್ಲ !,  ಅವು ಬದುಕನ್ನೇ ಮೀರಿ ನಿಂತಿವೆ !  (Numbers are not limited to Marks alone, they are beyond life !. )

ಬದುಕಿನ ಅನುಭವ ಹೊಂದಿದವರಿಗಷ್ಟೇ ಈ ರೀತಿಯ ವಿಚಾರವನ್ನು ಸರಳವಾಗಿ, ಸುಲಭವಾಗಿ ಹೇಳಬಲ್ಲ ಸಾಮರ್ಥ್ಯವಿರುವುದು.  ಅವರ ಈ ಯೋಚನೆಯ ಮೂಲವೇ ಅಸಂಖ್ಯಾತ ವಿಧ್ಯಾರ್ಥಿಗಳ ಬದುಕಿನ ಒಂದು ಹಂತದಲ್ಲಿ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಸಹಾಯ ಮಾಡಿದೆ ಎಂದು ನನ್ನ ಗಾಢವಾದ ನಂಬಿಕೆ.
Rating: 4.7/5 (11 votes cast)ಸಂಖ್ಯೆಗಳು ಅಂಕಗಳಿಗಷ್ಟೇ ಸೀಮಿತವಲ್ಲ!, 4.7 out of 5 based on 11 ratings

Leave a Reply

Your email address will not be published. Required fields are marked *